27 April 2007

ಸಂಖ್ಯಾ ಸರಣಿಗಳ ವಿಶ್ವಕೋಶ

ಗಣಿತ ಲೋಕದಲ್ಲಿ ಸಂಖ್ಯಾ ಸರಣಿಯೆಂದರೆ ಹೆಸರು ಸೂಚಿಸುವಂತೆ ಅಂಕಿಗಳ ಸಾಲು. ಇದು ಸೀಮಿತವಾಗಿರಬಹುದು ಇಲ್ಲವೆ ಕೊನೆಯಿಲ್ಲದಂತೆ ಸಾಗಬಹುದು.

ಕೆಲವು ಸಂಖ್ಯಾ ಸರಣಿಯನ್ನು ಸೂತ್ರದ ಪ್ರಕಾರ ರಚಿಸಬಹುದು. ಉದಾಹರಣೆಗೆ ಸಮ ಹಾಗೂ ಬೆಸ ಸಂಖ್ಯೆಗಳ ಸರಣಿ. ಸಮ ಸಂಖ್ಯೆಗಳನ್ನು 2 ರಿಂದ ಯಾವುದೇ ಶೇಷವಿಲ್ಲದಂತೆ ಭಾಗಿಸಬಹುದು. ಅವುಗಳನ್ನು ಈ ಸೂತ್ರದಿಂದ ರಚಿಸಬಹುದು.
F(n) = 2n
(...,-4,-2,0,2,4,6,...) ಈ ಸರಣಿ ಎರಡೂ ತುದಿಯಿಂದ ಬೆಳೆಯಬಲ್ಲದು.

ಅದೇ ರೀತಿ ಬೆಸ ಸಂಖ್ಯೆಗಳ ಸರಣಿಯನ್ನು ಈ ಸೂತ್ರದಿಂದ ಸೂಚಿಸಬಹುದು.
F(n) = 2n + 1
(...,-3,-1,1,3,5,...)ಈ ಸರಣಿ ಕೂಡ ಎರಡೂ ತುದಿಯಿಂದ ಬೆಳೆಯಬಲ್ಲದು. ಇದಕ್ಕೂ ಕೊನೆ ಮೊದಲಿಲ್ಲ.

ವರ್ಗಗಳ ಸರಣಿಯನ್ನು ಕೆಳಗಿನಂತೆ ಸೂಚಿಸಬಹುದು.
F(n) = n^2
[0,1,4,9,16,25,36,49,...)
ಈ ಸರಣಿ ಒಂದು ತುದಿಯಿಂದ ಮಾತ್ರ ಬೆಳೆಯಬಲ್ಲದು.

ಕೆಲವು ಸರಣಿಗಳನ್ನು ಅವುಗಳಲ್ಲಿನ ಸಂಖ್ಯೆಗಳ ಸಂಬಂಧದಿಂದ ರಚಿಸಲಾಗುತ್ತದೆ. ಉದಾಹರಣೆಗೆ ಫಿಬೊನಾಸಿ ಸಂಖ್ಯೆಗಳು. ಇದರಲ್ಲಿ ಸರಣಿಯ ಮೊದಲ ಎರಡು ಸಂಖ್ಯೆಗಳು ನಿರ್ದಿಷ್ಟ ಬೆಲೆ 0 ಮತ್ತು 1 ಇವೆ. ನಂತರದ ಸಂಖ್ಯೆಯನ್ನು ಹಿಂದಿನ ಎರಡು ಸಂಖ್ಯೆಗಳನ್ನು ಕೂಡಿಸಿ ಪಡೆಯಲಾಗುತ್ತದೆ. ಇದನ್ನು ಕೆಳಗಿನ ಸೂತ್ರದೊಂದಿಗೆ ರಚಿಸಬಹುದು.

F(n) = F(n-1)+F(n-2), F(0)=0, F(1)=1

ನಮಗೆ ಸಿಗುವ ಫಿಬೊನಾಸಿ ಸರಣಿ [0,1,1,2,3,5,8,13,...)

ಗಣಿತ ಲೋಕದಲ್ಲಿ ಈ ರೀತಿ ಅನೇಕ ಸರಣಿಗಳಿವೆ. ಹೊಸ ಸರಣಿಗಳನ್ನು ಗಣಿತಜ್ಞರು ಕಂಡು ಹಿಡಿಯುತ್ತಿದ್ದಾರೆ.

ಇವುಗಳ ಬಗ್ಗೆ ಮಾಹಿಯನ್ನು ಒಂದೇ ಕಡೆ ಸಿಗುವಂತಿದ್ದರೆ ಹೇಗೆ? ನಿಮಗೆ ಯಾವುದೇ ಸರಣಿ ಸಿಕ್ಕರೆ ಅದರ ಬಗ್ಗೆ ಹೆಚ್ಚು ತಿಳಿಯುವುದು ಹೇಗೆ?

ಉತ್ತರ ಸುಲಭ! ಅಂತರ್ಜಾಲದಲ್ಲಿರುವ ಪೂರ್ಣ ಸಂಖ್ಯಾ ಸರಣಿ ಕಣಜ.

ಇಲ್ಲಿ ಒಂದು ಲಕ್ಷಕ್ಕೂ ಹೆಚ್ಚಿನ ಸಂಖ್ಯಾ ಸರಣಿಗಳ ಬಗ್ಗೆ ಮಾಹಿತಿಯನ್ನು ಶೇಖರಿಸಿ ಇಡಲಾಗಿದೆ. ಈ ರೀತಿ ಸಂಖ್ಯೆಗಳ ವಿಶ್ವಕೋಶ ಜಗತ್ತಿನಲ್ಲಿ ಬೇರೆಲ್ಲಿಯೂ ಇರಲಿಕ್ಕಿಲ್ಲ.

ಇದನ್ನು ಬಳಸುವುದೂ ಸುಲಭ. ನಿಮಗೆ ಸರಣಿಯ ಹೆಸರು ಗೊತ್ತಿದ್ದರೆ ಅದರ ಮೂಲಕ ಹುಡುಕಬಹುದು. ಬರೀ ನಿಮಗೆ ಸಂಖ್ಯೆಗಳು ಗೊತ್ತಿದ್ದರೆ, ನೇರವಾಗಿ ಆ ಸರಣಿ ಕೊಟ್ಟು ಹುಡುಕಬಹುದು.

No comments: